---Advertisement---

ಮೈಸೂರು ಮಹಾನಗರ ಪಾಲಿಕೆ : ಆಯ-ವ್ಯಯ 2026-27

March 25, 2026 3:14 PM
---Advertisement---

ಶ್ರೀ.ನಿತೇಶ್ ಪಾಟೀಲ್, ಭಾ.ಆ.ಸೇ
ಆಡಳಿತಾಧಿಕಾರಿಗಳು

ದೇಶದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿಷ್ಠಿತ ಮಹಾನಗರ ಪಾಲಿಕೆಯಾಗಿರುವ ಹಾಗೂ ಸ್ವಚ್ಚನಗರಿ ಎಂಬ ಬಿರುದಿಗೆ ಪಾತ್ರವಾಗಿರುವ, ಅರಮನೆಗಳ ನಗರ ಹಾಗೂ ಸಾಂಸ್ಕೃತಿಕ ನಗರ ಎಂದೇ ಖ್ಯಾತಿ ಪಡೆದಿರುವ ಯದುವಂಶದ ಅರಸರಿಂದ ಸ್ಥಾಪಿತವಾದ ಮೈಸೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಪರಿಷ್ಕೃತ ಆಯ-ವ್ಯಯ ಹಾಗೂ 2026-27ನೇ ಸಾಲಿನ ಅಂದಾಜು ಆಯ-ವ್ಯಯವನ್ನು ನಗರಪಾಲಿಕೆಯ ವಾಸ್ತವಿಕ ಮಾಹಿತಿಯ ಅನುಸಾರ ತಯಾರಿಸಿ ಕರ್ನಾಟಕ ನಗರಪಾಲಿಕೆಗಳ ಆಯ-ವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006, ಭಾಗ-ಡಿ, ಅಧ್ಯಾಯ 24ರಂತೆ ಹಾಗೂ ಕೆ.ಎಂ.ಎ.ಬಿ.ಆರ್ ನಿಯಮ 131ರಡಿ ತಯಾರಿಸಲಾದ 2026-27ನೇ ಸಾಲಿನ ಆಯ-ವ್ಯಯವನ್ನು 132ರ ನಿಯಮದಡಿ ಮಂಡಿಸುತ್ತಿದ್ದೇನೆ.

2025-26ನೇ ಸಾಲಿನ ಪರಿಷ್ಕೃತ ಆಯ-ವ್ಯಯದ ಒಂದು ಸಂಕ್ಷಿಪ್ತ ಚಿತ್ರಣ

[ರೂ. ಲಕ್ಷಗಳಲ್ಲಿ]

ಪ್ರಾರಂಭಿಕ ಶಿಲ್ಕು 31056.44
ಜಮೆಗಳು 93320.66
ಒಟ್ಟು 124377.10
ಪಾವತಿಗಳು 123406.88
ಆಖೈರು ಶಿಲ್ಕು 970.22

2025-26ನೇ ಸಾಲಿನ ಆಯ-ವ್ಯಯದಲ್ಲಿ ಒಟ್ಟು ರೂ.93320.66 ಲಕ್ಷಗಳ ಜಮೆಗಳನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್-2025ರ ಅಂತ್ಯಕ್ಕೆ ರೂ.61586.05 ಲಕ್ಷಗಳ ಜಮೆಗಳನ್ನು ಸ್ವೀಕರಿಸಲಾಗಿರುತ್ತದೆ.

2025-26ನೇ ಸಾಲಿನ ಆಯ-ವ್ಯಯದಲ್ಲಿ ರೂ.123406.88 ಲಕ್ಷಗಳನ್ನು ಪಾವತಿಸಲು ಅವಕಾಶ ಮಾಡಲಾಗಿತ್ತು.ನಗರಪಾಲಿಕೆಯು ಸ್ವಯಂ ಸಂಪನ್ಮೂಲಗಳ ಕ್ರೋಢೀಕರಣದ ಹಾಗೂ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳ ಆಧಾರದ ಮೇಲೆ ವೆಚ್ಚ ಭರಿಸಬೇಕಾಗಿರುವುದರಿಂದ ಸ್ವಯಂ ಸಂಪನ್ಮೂಲಗಳ ಹಾಗೂ ಅನುದಾನಗಳ ಲಭ್ಯತೆಗನುಸಾರವಾಗಿ ಪ್ರಸ್ತುತ ಡಿಸೆಂಬರ್-2025ರ ಅಂತ್ಯಕ್ಕೆ ರೂ.59850.56 ಲಕ್ಷಗಳನ್ನು ಪಾವತಿಸಲಾಗಿರುತ್ತದೆ.

2026-27ನೇ ಸಾಲಿನ ಆಯವ್ಯಯವನ್ನು ಈ ಕೆಳಗಿನಂತೆ ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

2026-27ನೇ ಸಾಲಿನ ಆಯ-ವ್ಯಯದ ವಿವರ

[ರೂ. ಲಕ್ಷಗಳಲ್ಲಿ]

ಪ್ರಾರಂಭಿಕ ಶಿಲ್ಕು 23464.80
ಜಮೆಗಳು 107648.32
ಒಟ್ಟು 131113.32
ಪಾವತಿಗಳು 130092.91
ಆಖೈರು ಶಿಲ್ಕು 1020.21

2026-27ನೇ ಸಾಲಿಗೆ ಪಾಲಿಕೆಗೆ ಈ ಕೆಳಕಂಡ ಮೂಲಗಳಿಂದ ಸಂಪನ್ಮೂಲ ನಿರೀಕ್ಷಿಸಲಾಗಿದೆ

  ಯಾವುದೇ ಸಂಸ್ಥೆಯು ಪರಿಣಾಮಕಾರಿ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಾದರೆ ಹಣಕಾಸಿನ ಲಭ್ಯತೆ (ಜಮೆಗಳ ಕ್ರೋಢೀಕರಣ) ಅತ್ಯವಶ್ಯಕವಾಗಿರುತ್ತದೆ. ಪಾಲಿಕೆಯು ನಿರ್ವಹಣಾ ಸಂಸ್ಥೆಯಾಗಿದ್ದು ನಾಗರೀಕರುಗಳಿಗೆ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಒದಗಿಸಲು ಹಣಕಾಸಿನ ಪಾತ್ರ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಯ ಜಮೆಗಳ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಸರಳೀಕರಣವನ್ನು ಸಹ ಮಾಡಲಾಗಿರುತ್ತದೆ.

ಆಸ್ತಿ ತೆರಿಗೆ

2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ ಹಾಗೂ ಖಾತಾ ವರ್ಗಾವಣೆ ಶುಲ್ಕ ಹಾಗೂ ಖಾತಾ ಪ್ರತಿಗಳ ಶುಲ್ಕ, ಜಾಹೀರಾತು ಶುಲ್ಕ ಸೇರಿದಂತೆ ಈ ಬಾಬ್ತಿನಲ್ಲಿ ಕಂದಾಯ ಶಾಖೆಯಿಂದ ರೂ.25260.00 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ಈ ಸಾಲಿನಲ್ಲಿ ಡಿಸೆಂಬರ್-2025ರ ಅಂತ್ಯದ ವರೆಗೆ ರೂ.22782.33 ಲಕ್ಷಗಳನ್ನು ಸಂಗ್ರಹಿಸಲಾಗಿರುತ್ತದೆ. 2026-27ನೇ ಸಾಲಿಗೆ ಈ ಬಾಬ್ತಿನಲ್ಲಿ ರೂ.28672.52 ಲಕ್ಷಗಳ ಜಮೆಗಳನ್ನು ನಿರೀಕ್ಷಿಸಲಾಗಿದೆ.

ನೀರಿನ ತೆರಿಗೆ ಹಾಗೂ ಒಳಚರಂಡಿ ನಿರ್ವಹಣಾ ಕರ

2025-26ನೇ ಸಾಲಿನಲ್ಲಿ ಈ ಬಾಬ್ತಿನಲ್ಲಿ ರೂ.9851.00 ಲಕ್ಷಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಡಿಸೆಂಬರ್-2025ರ ಅಂತ್ಯದವರೆಗೆ ರೂ.5780.47 ಲಕ್ಷಗಳ ಜಮೆಗಳನ್ನು ಕ್ರೋಢೀಕರಿಸಲಾಗಿದ್ದು, 2026-27ನೇ ಸಾಲಿಗೆ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ಶುಲ್ಕವಾಗಿ ರೂ.11535.00 ಲಕ್ಷಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಯೋಜನೆಗಳು ಮತ್ತು ನಿಬಂಧನೆಗಳು-ನಗರ ಮತ್ತು ಪಟ್ಟಣ ಯೋಜನೆ

2025-26ನೇ ಸಾಲಿನಲ್ಲಿ ಈ ಶೀರ್ಷಿಕೆಯಡಿ ಕಟ್ಟಡ ಪರವಾನಿಗೆ ಶುಲ್ಕ, ನೆಲಬಾಡಿಗೆ ಶುಲ್ಕ, ರಸ್ತೆ ಅಗೆತ ಶುಲ್ಕ, ಉತ್ತಮತೆ ಶುಲ್ಕ, ಪರಿಶೀಲನಾ ಶುಲ್ಕ, ನೀರಿನ ಸಂಪರ್ಕ ಶುಲ್ಕ, ಕಟ್ಟಡ ಪೂರ್ಣಗೊಂಡ ವರದಿ, ದಂಡ ಮತ್ತು ಜುಲ್ಮಾನೆ, ಒಳಚರಂಡಿ ಶುಲ್ಕಗಳು ಹಾಗೂ ಯೋಜನೆಗೆ ಸಂಬಂಧಿಸಿದ ಇತರೆ ಮೂಲಗಳಿಂದ ರೂ.1573.50 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ಡಿಸೆಂಬರ್-2025ರ ಅಂತ್ಯಕ್ಕೆ ರೂ.1567.07 ಲಕ್ಷಗಳನ್ನು ಕ್ರೋಡೀಕರಿಸಲಾಗಿದ್ದು, 2026-27ನೇ ಸಾಲಿಗೆ ರೂ.2750.00 ಲಕ್ಷಗಳ ಜಮೆಗಳನ್ನು ನಿರೀಕ್ಷಿಸಲಾಗಿದೆ.

ಉದ್ದಿಮೆ ಪರವಾನಗಿ ಶುಲ್ಕ

ಉದ್ದಿಮೆ ಪರವಾನಗಿಯಿಂದ 2025-26ನೇ ಸಾಲಿನಲ್ಲಿ ರೂ.611.00 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು ಡಿಸೆಂಬರ್-2025ರ ಅಂತ್ಯಕ್ಕೆ ರೂ.635.96 ಲಕ್ಷಗಳನ್ನು ಕ್ರೋಡೀಕರಿಸಲಾಗಿದ್ದು, 2026-27ನೇ ಸಾಲಿಗೆ ರೂ.884.00 ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

ನಗರ ಪಾಲಿಕೆ ಆಸ್ತಿಗಳಿಂದ ಬರುವ ಬಾಡಿಗೆ

2025-26ನೇ ಸಾಲಿನಲ್ಲಿ ಪಾಲಿಕೆಯ ವಾಣಿಜ್ಯ ಸಂಕೀರ್ಣಗಳು ಮತ್ತು ಮಾರುಕಟ್ಟೆಗಳ ಬಾಡಿಗೆ ರೂ.159.61 ಹಾಗೂ ಗರುಡಮಾಲ್ ನೆಲಗುತ್ತಿಗೆ ಬಾಡಿಗೆಯಿಂದ ರೂ.149.56 ಲಕ್ಷಗಳನ್ನು ಒಟ್ಟಾರೆಯಾಗಿ ರೂ.309.17 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ಡಿಸೆಂಬರ್-2025ರ ಅಂತ್ಯಕ್ಕೆ ಒಟ್ಟು ರೂ.204.42 ಲಕ್ಷಗಳನ್ನು ಕ್ರೋಡೀಕರಿಸಲಾಗಿದ್ದು, 2026-27ನೇ ಸಾಲಿಗೆ ವಾಣಿಜ್ಯ ಸಂಕೀರ್ಣಗಳು ಮತ್ತು ಮಾರುಕಟ್ಟೆಗಳ ಬಾಡಿಗೆಯಿಂದ ರೂ.500.00 ಲಕ್ಷಗಳನ್ನು ಹಾಗೂ ಗರುಡಮಾಲ್ ನೆಲಗುತ್ತಿಗೆ ಬಾಡಿಗೆಯಿಂದ ರೂ.149.56 ಲಕ್ಷಗಳನ್ನು ಒಟ್ಟಾರೆಯಾಗಿ ರೂ.649.56 ಲಕ್ಷಗಳನ್ನು ನಿರೀಕ್ಷಿಸಲಾಗಿದೆ.

ಜಾಹೀರಾತು ಶುಲ್ಕ

ಜಾಹೀರಾತು ಶುಲ್ಕದಿಂದ 2025-26ನೇ ಸಾಲಿನಲ್ಲಿ ರೂ.200.00 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು ಡಿಸೆಂಬರ್-2025ರ ಅಂತ್ಯಕ್ಕೆ ರೂ.106.75 ಲಕ್ಷಗಳನ್ನು ಕ್ರೋಡೀಕರಿಸಲಾಗಿದ್ದು, 2026-27ನೇ ಸಾಲಿಗೆ ರೂ.200.00 ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನಗಳು

ಅ] ರಾಜ್ಯ ಹಣಕಾಸು ಆಯೋಗದಿಂದ ಮುಕ್ತನಿಧಿ ಅನುದಾನ 2025-26ನೇ ಸಾಲಿಗೆ ರೂ. 880.00 ಲಕ್ಷಗಳನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್-2025ರ ಅಂತ್ಯದವರೆಗೆ ರೂ.440.00 ಲಕ್ಷಗಳು ಬಿಡುಗಡೆಯಾಗಿದ್ದು, 2026-27ನೇ ಸಾಲಿಗೆ ಈ ಬಾಬ್ತಿನಲ್ಲಿ ರೂ.348.00 ಲಕ್ಷಗಳ ಅನುದಾನವನ್ನು ರಾಜ್ಯ ಸರ್ಕಾರದಿಂದ ನಿಗಧಿಪಡಿಸಲಾಗಿದೆ. 2026-27ನೇ ಸಾಲಿಗೆ ಹೊರಗುತ್ತಿಗೆ ಪೌರಕಾರ್ಮಿಕರ ವೇತನ ಹಾಗೂ ವಿಶೇಷ ನೇಮಕಾತಿಯಡಿ ನೇಮಕಾತಿಯಾಗಿರುವ ಪೌರ ಕಾರ್ಮಿಕರ ವೇತನಕ್ಕಾಗಿ ರೂ.3377.00 ಲಕ್ಷಗಳನ್ನು ನಿಗಧಿಪಡಿಸಲಾಗಿರುತ್ತದೆ.

ಆ] ರಾಜ್ಯ ಸರ್ಕಾರದಿಂದ 2025-26ನೇ ಸಾಲಿಗೆ ಬೀದಿದೀಪ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುಚ್ಛಕ್ತಿ ಬಿಲ್ಲುಗಳ ಪಾವತಿಗಾಗಿ ರೂ.12521.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿತ್ತು, ಡಿಸೆಂಬರ್-2025ರ ಅಂತ್ಯದವರೆಗೆ ರೂ. 9390.75 ಲಕ್ಷಗಳು ಬಿಡುಗಡೆಯಾಗಿದ್ದು, 2026-27ನೇ ಸಾಲಿಗೆ ರೂ. 9636.00 ಲಕ್ಷಗಳ ಅನುದಾನವನ್ನು ಸರ್ಕಾರದಿಂದ ನಿಗಧಿಪಡಿಸಲಾಗಿದೆ.

ಇ] ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆ ಖಾಯಂ ಅಧಿಕಾರಿ/ ನೌಕರರ ವೇತನ, ನಿವೃತ್ತ ನೌಕರರ ಪಿಂಚಣಿ ವಂತಿಕೆ ಅನುದಾನವಾಗಿ 2025-26ನೇ ಸಾಲಿಗೆ ರೂ.8754.00 ಲಕ್ಷಗಳನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿತ್ತು. ಡಿಸೆಂಬರ್-2025ರ ಅಂತ್ಯಕ್ಕೆ ಅನುದಾನ ರೂ.8754.00 ಲಕ್ಷಗಳು ಬಿಡುಗಡೆಯಾಗಿದ್ದು, 2026-27ನೇ ಸಾಲಿಗೆ ರೂ.9038.00 ಲಕ್ಷಗಳ ಅನುದಾನವನ್ನು ಸರ್ಕಾರದಿಂದ ನಿಗಧಿಪಡಿಸಲಾಗಿದೆ.

ಈ] 16ನೇ ಹಣಕಾಸು ಆಯೋಗದ ಅನುದಾನ 2026-27ನೇ ಸಾಲಿಗೆ ರೂ. 11003.00 ಲಕ್ಷಗಳ ಅನುದಾನವನ್ನು ಸರ್ಕಾರದಿಂದ ನಿಗಧಿಪಡಿಸಲಾಗಿದೆ.

ಉ] ಮೈಸೂರು ನಗರದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕಳಕಳಿ ಹೊಂದಿರುವ ಮಾನ್ಯ ಲೋಕಸಭಾ/ ವಿಧಾನ ಸಭಾ ಹಾಗೂ ವಿಧಾನ ಪರಿಷತ್ ಸದಸ್ಯರುಗಳನ್ನು ಮೈಸೂರು ನಗರವು ಹೊಂದಿದ್ದು, ಇವರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ ನಗರದ ಅಭಿವೃದ್ಧಿಗಾಗಿ ರೂ. 45.00 ಲಕ್ಷಗಳ ಅನುದಾನವನ್ನು ನಿರೀಕ್ಷಿಸಲಾಗಿದೆ.

ಊ] ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಗ್ಗೆ ಅತೀವ ಕಳಕಳಿ ಹೊಂದಿರುವ ಮಾನ್ಯ ಮುಖ್ಯಮಂತ್ರಿಗಳು 2026-27ನೇ ಸಾಲಿನಲ್ಲಿ ಎಸ್.ಎಫ್.ಸಿ ವಿಶೇಷ ಅನುದಾನದಡಿ ನಗರದ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ದಿಗಾಗಿ ರೂ.573.22 ಲಕ್ಷಗಳು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ದಿಗಾಗಿ ಒಟ್ಟು ರೂ.1661.02 ಲಕ್ಷಗಳು, ಚಾಮರಾಜ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರೂ.2231.75 ಲಕ್ಷಗಳು ಮತ್ತು ನರಸಿಂಹರಾಜ ವಿಧಾಸಭಾ ಕ್ಷೇತ್ರದ ಸಮಗ್ರ ಅಭಿವೃಧ್ದಿಗಾಗಿ ರೂ.581.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1.0 ರಡಿ ಪ್ರಸಕ್ತ ಸಾಲಿಗೆ ರೂ 1000.00 ಲಕ್ಷಗಳು ಹಾಗೂ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-2.0 ರಡಿ ಪ್ರಸಕ್ತ ಸಾಲಿಗೆ 10000.00 ಲಕ್ಷಗಳನ್ನು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದ ಸ್ವಚ್ಚಭಾರತ್-2.0 ಅನುದಾನದಡಿ ರೂ.1328.10 ಲಕ್ಷಗಳ ಅನುದಾನವನ್ನು ನಿರೀಕ್ಷಿಸಲಾಗಿದೆ. ಕೇಂದ್ರ ಪುರಸ್ಕೃತ ಅಮೃತ್-2.0 ಯೋಜನೆಯಡಿ ಉದ್ಯಾನವನಗಳು ಮತ್ತು ಜಲಸಂಪನ್ಮೂಲ ಅಭಿವೃದ್ದಿಗಾಗಿ ರೂ.1500.00 ಲಕ್ಷಗಳನ್ನು ನಿರೀಕ್ಷಿಸಲಾಗಿದೆ, ರಾಜ್ಯ ವಿಪತ್ತು ಉಪಷಮನ ನಿಧಿಯಿಂದ ರೂ.100.00 ಲಕ್ಷಗಳನ್ನು ನಿರೀಕ್ಷಿಸಲಾಗಿದೆ, ಅಲ್ಲದೇ ನಗರದಲ್ಲಿ ಸಂಗ್ರಹಣೆಯಾಗುತ್ತಿರುವ ಪಾರಂಪರಿಕ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ ರಾಷ್ಟೀಯ ಹಸಿರು ನ್ಯಾಯ ಮಂಡಳಿಯಿಂದ ರೂ.2606.28 ಲಕ್ಷಗಳನ್ನು ನಿರೀಕ್ಷಿಸಲಾಗಿದೆ.

2026-27ನೇ ಸಾಲಿನ ಆಯ-ವ್ಯಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಪ್ರಮುಖ ಯೋಜನೆಗಳು.

ಮೈಸೂರು ಎಂಬ ಹೆಸರು 'ಮಹಿಷೂರು' ಎಂಬ ಪದದಿಂದ ಬಂದಿದೆ. ಮೈಸೂರು ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಇದನ್ನು ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಅರಮನೆಗಳ ಸಾಲುಗಳನ್ನೇ ಹೊಂದಿರುವ ಕಾರಣ ಮೈಸೂರಿಗೆ "ಅರಮನೆಗಳ ನಗರ" ಎಂಬ ಹೆಸರೂ ಇದೆ. ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪಾಲಿಕೆಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಯು ತನ್ನ ವಿವಿಧ ಮೂಲಗಳಿಂದ ಬರುವ ಆದಾಯವನ್ನು ಪ್ರಮುಖ ಯೋಜನೆಗಳಿಗೆ ವಿನಿಯೋಗಿಸಲು ಯೋಜಿಸಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಎಸ್‌ಎಫ್‌ಸಿ ವಿಶೇಷ ಅನುದಾನಗಳು ಹಾಗೂ 16ನೇ ಹಣಕಾಸು ಆಯೋಗದ ಹಾಗೂ ಅಮೃತ್-2, ಇತರೆ ಅನುದಾನಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ವಿವಿಧ ಬಾಬ್ತುಗಳಿಗೆ ಅನುದಾನ ವೆಚ್ಚ ಮಾಡಲು ಯೋಜಿಸಲಾಗಿದೆ.

2026-27ನೇ ಸಾಲಿನ ಆಯ-ವ್ಯಯದಲ್ಲಿ ಈ ಕೆಳಕಂಡ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಹಿಂದಿನ ಸಾಲಿನ ಆಯ-ವ್ಯಯದಲ್ಲಿ ಘೋಷಣೆ ಮಾಡಿ ಕಾರ್ಯರೂಪಕ್ಕೆ ತರಲು ಬಾಕಿ ಇರುವ ಎಲ್ಲಾ ಯೋಜನೆಗಳೊಂದಿಗೆ ಈ ಕೆಳಕಂಡ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕುಂಬಾರಕೊಪ್ಪಲಿನ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ.

ಮೈಸೂರಿನ ಸಾರ್ವಜನಿಕರಿಗೆ ಉತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕುಂಬಾರಕೊಪ್ಪಲಿನಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದು ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಆಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ಮೈಸೂರಿನ ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸುಸಜ್ಜಿತ ಕ್ರೀಡಾಂಗಣ ಇದಾಗಿದ್ದು, ಸ್ಥಳೀಯ ಯುವಕರಿಗೆ ಮತ್ತು ಕ್ರೀಡಾ ಆಸಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದರಿ ಉದ್ದೇಶಕ್ಕಾಗಿ ರೂ.500.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಪುರಭವನ ಅಭಿವೃದ್ಧಿ

ಮೈಸೂರಿನ ಅಭಿವೃದ್ಧಿಯಲ್ಲಿ ಪುರಭವನ (Town Hall) ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆಗಳು ಮತ್ತು ಶೈಕ್ಷಣಿಕ ಸಮಾರಂಭಗಳಿಗೆ ವೇದಿಕೆಯಾಗಿದೆ. ಐತಿಹಾಸಿಕ ನಗರದ ಹೃದಯಭಾಗದಲ್ಲಿರುವ ಈ ಸ್ಥಳವು ಮೈಸೂರಿನ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಮತ್ತು ಸಾರ್ವಜನಿಕ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ, ಇದು ನಗರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಸಂಕೇತವಾಗಿದೆ. ಪುರಭವನ ಅಭಿವೃದ್ದಿ ಪಡಿಸುವುದರಿಂದ ಶಾಲಾ-ಕಾಲೇಜು ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಸಮಾರಂಭಗಳಿಗೆ, ಕಲಾವಿಧರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸದರಿ ಉದ್ದೇಶಕ್ಕಾಗಿ ರೂ.300.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಈಜುಕೊಳ ನಿರ್ಮಾಣ

ಮೈಸೂರು ಪಾಲಿಕೆ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಮೂರು ಈಜುಕೊಳಗಳನ್ನು PPP/HYBRID ಮಾದರಿಯಲ್ಲಿ ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ.

ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಲು ಪರೀಕ್ಷ ಉಪ-ವಿಭಾಗ ಮತ್ತು ಪ್ರಯೋಗಾಲಯವನ್ನು ಸ್ಥಾಪಿಸುವುದು.

ಕಾಮಗಾರಿಗಳ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು ಗುಣ ನಿಯಂತ್ರಣಾ ಉಪ-ವಿಭಾಗ (Quality Control Sub-division) ಮತ್ತು ಪ್ರಯೋಗಾಲಯಗಳನ್ನು (Laboratory) ಸ್ಥಾಪಿಸುವುದರಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ, ಕಟ್ಟಡ, ಸೇತುವೆ ಮುಂತಾದ ಸಾರ್ವಜನಿಕ ಕಾಮಗಾರಿಗಳಲ್ಲಿ ಬಳಸುವ ಸಿಮೆಂಟ್, ಮರಳು, ಕಾಂಕ್ರೀಟ್ ಮತ್ತು ಡಾಂಬರು ನಿಗದಿತ ಮಾನದಂಡಗಳ ಪ್ರಕಾರ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗುತ್ತದೆ. ಸದರಿ ಉದ್ದೇಶಕ್ಕಾಗಿ ರೂ.100.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿ.

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ “ಜನಸ್ನೇಹಿ ಪಾದಚಾರಿ ಮಾರ್ಗಗಳ” ಅಭಿವೃದ್ಧಿ ಅತ್ಯಗತ್ಯ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯ ನಡುವೆ ಪಾದಚಾರಿಗಳ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಜನಸ್ನೇಹಿ ಪಾದಚಾರಿ ಮಾರ್ಗಗಳನ್ನು (People-friendly Foot-paths) ನಿರ್ಮಿಸುವುದು ಅಗತ್ಯವಾಗಿದೆ. ಸುಸಜ್ಜಿತ ಪಾದಚಾರಿ ಮಾರ್ಗಗಳು ಕೇವಲ ಸಂಚಾರಕ್ಕೆ ಮಾತ್ರವಲ್ಲದೆ, ಜನರ ಆರೋಗ್ಯ ವೃದ್ಧಿಗೂ ಪೂರಕವಾಗಿವೆ. ಸದರಿ ಉದ್ದೇಶಕ್ಕಾಗಿ ರೂ.1000.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಪುಟ್ಟರಾಜ ಗವಾಯಿ ಕ್ರೀಡಾಂಗಣ ಅಭಿವೃದ್ಧಿ.

ಪಾಲಿಕೆ ವ್ಯಾಪ್ತಿಯ ಜೆ.ಪಿ ನಗರದಲ್ಲಿರುವ ಪುಟ್ಟರಾಜ ಗವಾಯಿ ಕ್ರೀಡಾಂಗಣದ ಒಳಾಂಗಣದಲ್ಲಿ ಈಗಾಲೇ ನಿರ್ಮಾಣ ಮಾಡಲಾಗಿರುವ ಕನ್ನಡ ಭವನದ ಮುಂದುವರೆದ ಅಭಿವೃದ್ದಿ ಕಾಮಗಾರಿ ಮತ್ತು ಒಳಾಂಗಣ ಕ್ರೀಡಾಂಗಣಗಳ ಮುಂದುವರೆದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಸದರಿ ಉದ್ದೇಶಕ್ಕಾಗಿ ರೂ.110.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ವೃತ್ತಗಳ ಅಭಿವೃದ್ಧಿ.

ಪಾಲಿಕೆ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಮುಖ ವೃತ್ತಗಳನ್ನು ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ. ಸದರಿ ಉದ್ದೇಶಕ್ಕಾಗಿ ರೂ.500.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳು ಹಾಗೂ ಚರಂಡಿಗಳನ್ನು ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದ್ದು, ಸದರಿ ಉದ್ದೇಶಕ್ಕಾಗಿ ರೂ.3000.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ನೀರು ಸರಬರಾಜು ಮತ್ತು ಒಳಚರಂಡಿಗಳ ಕೊಳವೆಮಾರ್ಗಗಳ ಅಭಿವೃದ್ಧಿ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿಗಳ ಕೊಳವೆಮಾರ್ಗಗಳನ್ನು ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದ್ದು, ಸದರಿ ಉದ್ದೇಶಕ್ಕಾಗಿ ರೂ.3000.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಪಾರಂಪರಿಕ ಶೌಚಾಲಯಗಳ ನಿರ್ಮಾಣ.

ಮೈಸೂರು ನಗರದಲ್ಲಿ ಪ್ರವಾಸಿಗಳು ಹಾಗೂ ಜನನಿಬಿಡ ಪ್ರದೇಶದಲ್ಲಿ ಪಾರಂಪರಿಕ ಶೈಲಿಯಲ್ಲಿ 02 ಸುಸಜ್ಜಿತ ಶೌಚಾಲಯ ನಿರ್ಮಾ‍ಣ ಮಾಡಲು ಉದ್ದೇಶಿಸಲಾಗಿದೆ. 

ಮಾರುಕಟ್ಟೆಗಳ ನಿರ್ಮಾಣ.

ಪಾಲಿಕೆ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂದಣಿ ಇರುವ ಪ್ರಮುಖ ಸ್ಥಳಗಳಲ್ಲಿ PPP ಮಾದರಿಯಲ್ಲಿ ಮಾರುಕಟ್ಟೆಗಳ ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ. 

ಇ-ಅಫೀಸ್.

ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಕಛೇರಿಯಲ್ಲಿ ಇ-ಆಫೀಸ್ ಅನ್ನು ಅನುಷ್ಠಾನಗೊಳಿಸಲಾಗಿದ್ದು, ವಲಯ ಕಛೇರಿ 1 ರಿಂದ 9 ಕಛೇರಿಗಳು ಹಾಗೂ ವಾಣಿವಿಲಾಸ ನೀರು ಸರಬರಾಜು ವಿಭಾಗ, ಮಾರುಕಟ್ಟೆ ವಿಭಾಗ, ಆಸ್ತಿ ವಿಭಾಗ ಮತ್ತು ಆಶ್ರಯ ವಿಭಾಗಗಳಲ್ಲಿ ದಿನಾಂಕ:01-04-2026 ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗುವುದು.

ಅಭಿಲೇಖಾಲಯದ ಎ,ಬಿ,ಸಿ,ಡಿ ವರ್ಗದ ಕಡತಗಳನ್ನು ಗಣಕೀಕರಣಗೊಳಿಸುವ ಬಗ್ಗೆ.

ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿಯ ಅಭಿಲೇಖಾಲಯದ ಎ,ಬಿ,ಸಿ,ಡಿ ವರ್ಗದ ಕಡತಗಳನ್ನು Record Indexing and Digitalization ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸುವ ಸಂಬಂಧ ಈಗಾಗಲೇ, ಒಟ್ಟು 12,87,133 ಪ್ರತಿಗಳನ್ನು Scanning and Digitalization ಕಾರ್ಯಕೈಗೊಂಡು ಗಣಕೀಕರಣಗೊಳಿಸಲಾಗಿರುತ್ತದೆ.

ಉಳಿದಂತೆ ವಲಯ ಕಛೇರಿ 1 ರಿಂದ 9 ರ ಎಲ್ಲಾ ದಾಖಲೆಗಳು ಹಾಗೂ ಆಸ್ತಿ ಶಾಖೆಯ ಎಲ್ಲಾ ದಾಖಲೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದ್ದು, ಸದರಿ ಉದ್ದೇಶಕ್ಕಾಗಿ ರೂ.50.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಪಾಲಿಕೆಯ ನಾಗರೀಕ ದತ್ತಾಂಶ ಮತ್ತು ಕುಂದು ಕೊರತೆ ನಿರ್ವಹಣಾ ಯೋಜನೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ‍ ವಾರ್ಡ್ಗಳಲ್ಲಿ QR ಕೋಡ್ ಗಳನ್ನು ಅಳವಡಿಸಲಾಗುತ್ತದೆ. ನಾಗರೀಕರು ಈ QR ಕೋಡ್ ನ್ನು Scan ಮಾಡಿದಾಗ, ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳ / ಸಿಬ್ಬಂಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ನೇರವಾಗಿ ಪಡೆಯಬಹುದು.

ಹಿನ್ನೆಲೆ ವ್ಯವಸ್ಥೆ (Back-end) ಯಲ್ಲಿ ನಾಗರೀಕರ ದೂರುಗಳಿಗೆ ಮಹಾನಗರ ಪಾಲಿಕೆಯ ಪ್ರತಿಯೊಬ್ಬ ನೌಕರರು ನೀಡುವ ಪ್ರತಿಕ್ರಿಯೆ ಸಮಯವನ್ನು ಟ್ರ್ಯಾಕ್ ಮಾಡಿ, ಕೇಂದ್ರಿತ ಡ್ಯಾಶ್ ಬೋರ್ಡ್ ನಲ್ಲಿ ದಾಖಲಿಸಲಾಗುತ್ತದೆ. ಈ ಯೋಜನೆಯಿಂದ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ನೇರ ಮತ್ತು ಪಾರದರ್ಶಕ ಸಂಪರ್ಕ ಸಾಧಿಸಲು ಸಹಕಾರಿಯಾಗುತ್ತದೆ ಹಾಗೂ ಹೆಚ್ಚಿನ ನಾಗರೀಕರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಿ, ಆಡಳಿತಾತ್ಮಕ ಹೊಣೆಗಾರಿಕೆಯನ್ನು ಹೆಚ್ಚಿಸಬಹುದಾಗಿರುತ್ತದೆ.

ಮಿಯಾವಾಕಿ ಮಾದರಿಯ ಕಿರು ಅರಣ್ಯ ಅಭಿವೃದ್ಧಿ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಸಾಲಿನ ಬಜೆಟ್ನ ಘೋಷಣೆಯಂತೆ ದಟ್ಟಗಳ್ಳಿಯ ಜೋಡಿ ಬೇವಿನ ಮರ ಉದ್ಯಾನವನದಲ್ಲಿ ಮಿಯಾವಾಕಿ ಮಾದರಿಯ ಕಿರು ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ 03 ಉದ್ಯಾನವನಗಳಲ್ಲಿ ಮಿಯಾವಾಕಿ ಮಾದರಿಯ ಕಿರು ಅರಣ್ಯವನ್ನು CSR ಅನುದಾನದಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುತ್ತದೆ.

ಪಾಲಿಕೆಯ ಉದ್ಯಾನವನಗಳ ಸಂರಕ್ಷಣೆ ಮತ್ತು ಮಾಹಿತಿ ಫಲಕ.

 ಉದ್ಯಾನವನಗಳು ಕೇವಲ ವಿಹಾರ ತಾಣಗಳಲ್ಲ, ಅವು ಪ್ರಕೃತಿ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿವೆ. ಮಾಹಿತಿ ಫಲಕಗಳನ್ನು ಅಳವಡಿಸುವುದರಿಂದ ಪಾಲಿಕೆಯ ಆಸ್ತಿಗಳ ಸಂರಕ್ಷಣೆ ಮಾಡಿದಂತಾಗುತ್ತದೆ. ಆದ್ದರಿಂದ, ಪಾಲಿಕೆಯ ಎಲ್ಲಾ ಉದ್ಯಾನವನಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಸದರಿ ಉದ್ದೇಶಕ್ಕಾಗಿ ರೂ.68.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಉದ್ಯಾನವನಗಳಲ್ಲಿ ಹೊರಾಂಗಣ ಸಂಗೀತ ವಾದ್ಯಗಳ ಅಳವಡಿಕೆ.

 ಮೈಸೂರು ನಗರವು ಸಾಂಸ್ಕೃತಿಕ ನಗರಿ ಎಂದು ಪ್ರಖ್ಯಾತಿಯಾಗಿದ್ದು, ಸಾರ್ವಜನಿಕರ ಸಾಂಸ್ಕೃತಿಕ ಅಭಿವ್ಯಕ್ತಿ ಉತ್ತೇಜಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಪಾಲಿಕೆ ವ್ಯಾಪ್ತಿಯ ಒಂದು ಉದ್ಯಾನವನದಲ್ಲಿ ವಿದೇಶಿ ಮಾದರಿಯಂತೆ ಹೊರಾಂಗಣ ಸಂಗೀತ ವಾದ್ಯಗಳನ್ನು ಅಳವಡಿಸಲು ಉದ್ದೇಶಿಸಲಾಗಿರುತ್ತದೆ. ಈ ರೀತಿಯ ಹೊರಾಂಗಣ ಸಂಗೀತ ವಾದ್ಯಗಳು ವಿಶೇಷವಾಗಿ ಮಕ್ಕಳು ಮತ್ತು ಕುಟುಂಬಗಳಿಗೆ ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಸಂಗೀತ ಕೌಶಲ್ಯಗಳ ಉತ್ತೇಜನೆಗೆ ಹಾಗೂ ಪ್ರವಾಸೋದ್ಯಮ ಅಭಿವೃದ್ದಿಗೂ ಸಹಕಾರಿಯಾಗುತ್ತವೆ. ಸದರಿ ಉದ್ದೇಶಕ್ಕಾಗಿ ರೂ.20.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಸಾಲು ಮರಗಳ ಸಮೀಕ್ಷೆ.

 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾಲು ಮರಗಳನ್ನು ಸಮೀಕ್ಷೆ ಮಾಡುವುದು ಸಾರ್ವಜನಿಕರ ಕೋರಿಕೆಯಾಗಿತ್ತು. ಸದರಿ ಸಮೀಕ್ಷೆಯನ್ನು  CSAL ಸಂಸ್ಥೆಯ ಸಹಭಾಗಿತ್ವದಲ್ಲಿ ಚಾಲನೆ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿರುತ್ತದೆ. ಇದರಿಂದ ಮೈಸೂರು ನಗರ ವ್ಯಾಪ್ತಿಯಲ್ಲಿನ ಮರಗಳ ಸಂಖ್ಯೆ, ಪ್ರಭೇದ ಮತ್ತು ಅಳತೆಗಳ ಮಾಹಿತಿ ದೊರಕಲಿದ್ದು, ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಲಿದೆ. 

ಹಸಿರು – ಉಸಿರು.

“ಗಿಡ ಬೆಳೆಸಿ, ಪರಿಸರ ಉಳಿಸಿ” ಎಂಬಂತೆ, ವಲಯ ಕಚೇರಿ-01 ರಿಂದ 09ರ ವ್ಯಾಪ್ತಿಯಲ್ಲಿ,1500 ಗಿಡಗಳಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 13000 ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡಲು ಉದ್ದೇಶಿಸಲಾಗಿರುತ್ತದೆ. ಈ 13,000 ಗಿಡಗಳು ಮುಂದೊಂದು ದಿನ ಸುಂದರ ಕಾಡಾಗಿ ಮಾರ್ಪಟ್ಟು ನಾಡಿಗೆ ಆಮ್ಲಜನಕ ಮತ್ತು ತಂಪಾದ ಗಾಳಿಯನ್ನು ನೀಡುತ್ತವೆ. ¬¬¬¬

ಉದ್ಯಾನವನಗಳಲ್ಲಿನ ವ್ಯಾಯಾಮ (ಜಿಮ್್ಹ) ಸಲಕರಣೆಗಳ ನಿರ್ವಹಣೆ.

ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಜಿಮ್್ಹ ಸಲಕರಣಗಳನ್ನು ಅಳವಡಿಸಲಾಗಿದ್ದು, ಸದರಿ ಆರ್ಥಿಕ ವರ್ಷದಲ್ಲಿ ಜಿಮ್ ಸಲಕರಣೆಗಳನ್ನು ನಿರ್ವಹಣೆ ಮಾಡಲು ಉದ್ದೇಶಿಸಲಾಗಿರುತ್ತದೆ. 

ನಮ್ಮ ಮೈಸೂರು-ನಮ್ಮ ಕೊಡುಗೆ.

“ನಮ್ಮ ಮೈಸೂರು - ನಮ್ಮ ಕೊಡುಗೆ” ಶೀರ್ಷಿಕೆಯಡಿ ಪ್ರಸ್ತುತ ಪಾಲಿಕೆ ವ್ಯಾಪ್ತಿಯ 11 ಉದ್ಯಾನವನಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ದತ್ತು ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ಪ್ರೇರೇಪಿಸಿ ಇನ್ನೂ ಹೆಚ್ಚಿನ ಸಂಖ್ಯೆಯ ಉದ್ಯಾನವನಗಳನ್ನು ದತ್ತು ಯೋಜನೆಯಲ್ಲಿ ನಿರ್ವಹಣೆ ಮಾಡಿಸಲು ಉದ್ದೇಶಿಸಲಾಗಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನವನಗಳನ್ನು ದತ್ತು ಪಡೆದು ನಿರ್ವಹಣೆ ಮಾಡುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶ ಹೊಂದಲಾಗಿದೆ.

ಗ್ರೀನ್ ಪ್ರಾಪರ್ಟಿ ಟ್ಯಾಗ್ ಯೋಜನೆ.

ಈ ಯೋಜನೆಯು ನಾಗರಿಕರಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವುದು ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದನ್ನು ಉದ್ದೇಶಿಸಿದೆ. ಮಳೆನೀರು ಸಂಗ್ರಹಣೆ, ಸೌರ ವಿದ್ಯುತ್ ಬಳಕೆ, ತ್ಯಾಜ್ಯ ವಿಂಗಡಣೆ ಹಾಗೂ ಹಸಿ ತ್ಯಾಜ್ಯದಿಂದ ಗೊಬ್ಬರ ಮಾಡುವಂತಹ ಕ್ರಮಗಳನ್ನು ಅನುಸರಿಸುವ ಕಟ್ಟಡಗಳಿಗೆ “ಗ್ರೀನ್ ಪ್ರಾಪರ್ಟಿ ಟ್ಯಾಗ್” ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಸಾರ್ವಜನಿಕರಿಗೆ ಮಾನ್ಯತೆ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಇದರ ಮೂಲಕ ಮೈಸೂರು ನಗರವನ್ನು ಹಸಿರು, ಸ್ವಚ್ಛ ಹಾಗೂ ಮಾದರಿ ನಗರವಾಗಿ ರೂಪಿಸುವ ಗುರಿ ಹೊಂದಲಾಗಿದೆ.

ವೇಸ್ಟ್ ಟು ವಂಡರ್ ಪಾರ್ಕ್ ಅಭಿವೃದ್ಧಿ.

ವೇಸ್ಟ್ ಟು ವಂಡರ್ ಪಾರ್ಕ್ (PPP ಮಾದರಿ) ಈ ಯೋಜನೆಯಡಿ ತ್ಯಾಜ್ಯ ವಸ್ತುಗಳನ್ನು ಸೃಜನಾತ್ಮಕವಾಗಿ ಮರುಬಳಕೆ ಮಾಡಿ “ವೇಸ್ಟ್ ಟು ವಂಡರ್ ಪಾರ್ಕ್” ಅಭಿವೃದ್ಧಿಪಡಿಸಲಾಗುತ್ತದೆ. ಪ್ಲಾಸ್ಟಿಕ್, ಲೋಹ, ಇ-ತ್ಯಾಜ್ಯ ಮತ್ತು ವಸ್ತ್ರ ತ್ಯಾಜ್ಯಗಳನ್ನು ಬಳಸಿ ಕಲಾತ್ಮಕ ನಿರ್ಮಿತಿಗಳನ್ನು ಮಾಡಲಾಗುತ್ತದೆ. ಈ ಪಾರ್ಕ್ ಶಿಕ್ಷಣ ಹಾಗೂ ಮನರಂಜನಾ ಕೇಂದ್ರವಾಗಿದ್ದು, ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಕುರಿತು ಜಾಗೃತಿ ಮೂಡಿಸುತ್ತದೆ.

ಸ್ವಚ್ಛ CBD ಪ್ರದೇಶ ಕಾರ್ಯಕ್ರಮ.

ನಗರದ ಕೇಂದ್ರ ವ್ಯಾಪಾರ ಪ್ರದೇಶವನ್ನು 24×7 ಸ್ವಚ್ಛ ಹಾಗೂ ಸುವ್ಯವಸ್ಥಿತವಾಗಿ ಕಾಪಾಡುವ ಉದ್ದೇಶದಿಂದ CSR ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತದೆ. ನಿರಂತರ ಸ್ವಚ್ಛತೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಪರಿಸರ ಸ್ನೇಹಿ ಸುಂದರೀಕರಣ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರ ಮೂಲಕ CBD ಪ್ರದೇಶವನ್ನು ಸ್ವಚ್ಛ, ಆಕರ್ಷಕ ಹಾಗೂ ಮಾದರಿ ನಗರ ಪ್ರದೇಶವನ್ನಾಗಿ ರೂಪಿಸಲಾಗುವುದು.

ಘನ ತ್ಯಾಜ್ಯ ನಿರ್ವಹಣಾ (SWM) ವಾಹನಗಳಿಗೆ ವಿಕೇಂದ್ರೀಕೃತ ಇಂಧನ ಭರ್ತಿ ಕೇಂದ್ರಗಳ ಸ್ಥಾಪನೆ.

ಮೈಸೂರು ಮಹಾನಗರ ಪಾಲಿಕೆಯ SWM ವಾಹನಗಳ ಕಾರ್ಯಾಚರಣಾ ದಕ್ಷತೆ ಹೆಚ್ಚಿಸುವುದು ಹಾಗೂ ಇಂಧನ ಉಳಿತಾಯ ಸಾಧಿಸುವ ಉದ್ದೇಶದಿಂದ, ಕೆಸರೆ ಹಾಗೂ ವಿದ್ಯಾರಣ್ಯಪುರಂ ಪಾರ್ಕಿಂಗ್ ಕೇಂದ್ರಗಳಲ್ಲಿ ವಿಕೇಂದ್ರೀಕೃತ ಇಂಧನ ಭರ್ತಿ ಕೇಂದ್ರಗಳನ್ನು ಸ್ಥಾಪಿಸುವುದನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ಮುಖ್ಯ ಕಚೇರಿಯ ಇಂಧನ ಕೇಂದ್ರದ ಮೇಲಿನ ಅವಲಂಬನೆ ಇರುವುದರಿಂದ ಅನಾವಶ್ಯಕ ಸಂಚಾರ ಮತ್ತು ಇಂಧನ ವ್ಯಯವಾಗುತ್ತಿದೆ. ವಿಕೇಂದ್ರೀಕೃತ ವ್ಯವಸ್ಥೆಯಿಂದ ಇಂಧನ ಉಳಿತಾಯ, ಸಮಯದ ಸಮರ್ಪಕ ಬಳಕೆ ಮತ್ತು ವಾಹನಗಳ ಸಮಯೋಚಿತ ನಿಯೋಜನೆ ಸಾಧ್ಯವಾಗಲಿದೆ.

ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಂ.

ಮೈಸೂರು ಮಹಾನಗರ ಪಾಲಿಕೆಯಲ್ಲಿರುವ 579 ಸಂಖ್ಯೆ ವಾಹನಗಳ ಚಲನ-ವಲನಗಳು, ಚಾಲಕರ ನಡವಳಿಕೆಗಳು-ಸುರಕ್ಷಿತ ಚಾಲನ ಅಭ್ಯಾಸಗಳು, ಕಳ್ಳತನ ಅಥವಾ ಅನಧಿಕೃತ ಬಳಕೆ ಸಂದರ್ಭಗಳು, ಸಮಯ ನಿರ್ವಹಣೆ ಖಚಿತಪಡಿಸಿಕೊಳ್ಳಲು, ಜಿಪಿಎಸ್ ಪ್ಲೀಟ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ ಮೂಲಕ ವಾಹನಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಿ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದಾಗಿರುತ್ತದೆ.

ಕ್ಲೀನ್ ಸಿಟಿ ಆಪ್.

ಬೆಂಗಳೂರು ಮತ್ತು ಇತರೆ ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ಕ್ಲೀನ್ ಸಿಟಿ ಆಪ್‍ ಅನುಷ್ಠಾನಗೊಳಿಸಲಾಗಿದ್ದು, ಅದರಂತೆ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆಗಳು ಹಾಗೂ ವಾಣಿಜ್ಯ ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪಾಲಿಕೆ ವತಿಯಿಂದ ವಾಹನಗಳನ್ನು ನಿಯೋಜಿಸಲಾಗಿದ್ದು, ಸದರಿ ವಾಹನಗಳು ಸರಿಯಾದ ಸಮಯಕ್ಕೆ ತ್ಯಾಜ್ಯ ಸಂಗ್ರಹಣೆ ಮಾಡದಿದ್ದಲ್ಲಿ ಕ್ಲೀನ್ ಸಿಟಿ ಆಪ್ ಮುಖೇನ ಛಾಯಾಚಿತ್ರದೊಂದಿಗೆ ದೂರುಗಳನ್ನು ದಾಖಲಿಸಬಹುದಾಗಿರುತ್ತದೆ. ಸದರಿ ಆಪ್ ನ ವಿಶೇಷತೆ ಏನೆಂದರೆ ದೂರುಗಳನ್ನು ಅಪ್ಲೋಡ್ ಮಾಡಿದ 24 ಗಂಟೆಯೊಳಗೆ ದೂರುಗಳನ್ನು ಪರಿಹರಿಸಬಹುದಾಗಿರುತ್ತದೆ.

ಹಸಿ ತ್ಯಾಜ್ಯ ಸಂಸ್ಕರಣೆಗೆ 150 ಟಿಪಿಡಿ CBG ಘಟಕ ಸ್ಥಾಪನೆ.

ಮೈಸೂರು ಮಹಾನಗರ ಪಾಲಿಕೆ ಹಾಗೂ Bharat Petroleum Corporation Limited (BPCL) ಸಹಯೋಗದೊಂದಿಗೆ, ವಿದ್ಯಾರಣ್ಯಪುರಂನಲ್ಲಿ 150 ಟಿಪಿಡಿ ಸಾಮರ್ಥ್ಯದ ಸಂಕುಚಿತ ಜೈವ ಅನಿಲ (CBG) ಘಟಕವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ದಿನಕ್ಕೆ 150 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಶುದ್ಧ ಇಂಧನ ಉತ್ಪಾದಿಸಲು ಉದ್ದೇಶಿಸಲಾಗಿದೆ. ಇದರ ಮೂಲಕ ತ್ಯಾಜ್ಯ ನಿರ್ವಹಣೆ ಸುಧಾರಣೆ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ.
ಲಿಡಾರ್ (LIDAR) ಮತ್ತು ಡ್ರೋನ್ ಸರ್ವೇ.

ಲಿಡಾರ್ ಎಂದರೆ ‘ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್’. ಲಿಡಾರ್ ತಂತ್ರಜ್ಞಾನವು 3D ಮ್ಯಾಪಿಂಗ್ ಮೂಲಕ ಕಟ್ಟಡಗಳು, ರಸ್ತೆ ಜಾಲ, ಭೂ ಪ್ರದೇಶ ಮತ್ತು ಇತರ ಮೂಲ ಸೌಕರ್ಯಗಳ ನಿಖರ ಮಾಹಿತಿಯನ್ನು ವೇಗವಾಗಿ ಒದಗಿಸುತ್ತದೆ. ಇದರಿಂದ ಆಸ್ತಿ ಮ್ಯಾಂಪಿಂಗ್ ಸುಧಾರಣೆ, ಟ್ರಾಫಿಕ್ ನಿಯಂತ್ರಣ, ನರೆಪೀಡಿತ ಪ್ರದೇಶಗಳ ಗುರುತಿಸಲು ಸಹಕಾರಿ, ನಿಖರ ಭೌಗೋಳಿಕರ ಮಾಹಿತಿ ಆಧಾರವಾಗಿ ರಸ್ತೆ, ಡ್ರೈನೇಜ್ ಹಾಗೂ ಇತರ ಮೂಲಸೌಕರ್ಯ ಅಭಿವೃದ್ದಿಗೆ ಸಹಾಯಕವಾಗಿ ನಗರ ಯೋಜನೆಗೆ ಬೆಂಬಲ ನೀಡುತ್ತದೆ.

ವಸತಿ ರಹಿತರ ಆಶ್ರಯ ಕೇಂದ್ರದ ನಿರ್ವಹಣೆ.
ವಸತಿ ರಹಿತ ಕೇಂದ್ರಗಳು ಪ್ರಾರಂಭವಾಗಿ ಐದು ವರ್ಷ ಪೂರ್ಣಗೊಂಡಿರುವ ಆಶ್ರಯ ಕೇಂದ್ರವನ್ನು ಎನ್.ಜಿ.ಓ.ಗಳ ಮೂಲಕ ಮೈಸೂರು ಮಹಾನಗರ ಪಾಲಿಕೆ ಅನುದಾನಲ್ಲಿ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.
ಅಕ್ಕಕೆಫೆ ನಿರ್ಮಾಣ ಮತ್ತುನಿರ್ವಹಣೆ.
ಮಹಾನಗರ ಪಾಲಿಕೆಯ ಕೇಂದ್ರ ಕಛೇರಿ ಆವರಣದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಸದರಿ ಕೇಂದ್ರವನ್ನು ಮಹಿಳಾ ಎಸ್.ಹೆಚ್.ಜಿ.ಗಳ ಮುಖಾಂತರ ನಿರ್ವಹಣೆ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ.
ಕಾಫಿ ಕಿಯೋಸ್ಕ್ ಸೆಂಟರ್ ನಿರ್ಮಾಣ ಮತ್ತು ನಿರ್ವಹಣೆ.
ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಒಟ್ಟು 05 ಕಾಫಿ ಕಿಯೋಸ್ಕ್ ಕೇಂದ್ರಗಳನ್ನು ತೆರೆಯಲು ಅಭಿಯಾನ ನಿರ್ದೇಶನಾಲಯದಿಂದ ಸೂಚಿಸಿದ್ದು, ಸದರಿ ಕಾಫಿ ಕಿಯೋಸ್ಕ್ಗಳನ್ನು ಮಹಿಳಾ ಎಸ್.ಹೆಚ್.ಜಿ.ಗಳ ಮೂಲಕ ನಿರ್ವಹಣೆ ಮಾಡಲಾಗುವುದು.
ಕಾಲಕಾಲಕ್ಕೆ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸುವುದು.
ಮೈಸೂರು ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ-ಬದಿ ವ್ಯಾಪಾರಿಗಳನ್ನು ಜಿಯೋ ಟ್ಯಾಗಿಂಗ್ ಮೂಲಕ ಸಮೀಕ್ಷೆ ನಡೆಸಿ ಅವರಿಗೆ ಗುರುತಿನ ಪತ್ರ ಮತ್ತು ವ್ಯಾಪಾರ ಪ್ರಮಾಣ ಪತ್ರಗಳನ್ನು ನೀಡಿ ಮಾಸಿಕ ನೆಲ ಬಾಡಿಗೆ ಸಂಗ್ರಹಿಸಲು ಉದ್ದೇಶಿಸಲಾಗಿರುತ್ತದೆ.
Street Food Hubನಿರ್ಮಾಣ.
ಮೈಸೂರು ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರದ ಪಿ.ಎಂ ಸ್ವನಿಧಿ ಯೋಜನೆಯಡಿ Street Food Hubs ಗಳನ್ನು ನಿರ್ಮಿಸಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿ ಕೊಡಲು ಉದ್ದೇಶಿಸಲಾಗಿದೆ.
ಜನಸ್ಪಂದನ, ಇ-ಖಾತಾ ಹಾಗೂ ಸಿ.ಆರ್ ಅಭಿಯಾನ.
ಪಾಲಿಕೆಯ 09 ವಲಯ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಪ್ರತಿ ಶುಕ್ರವಾರದಂದು ಜನಸ್ವಂದನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಘನ ಸರ್ಕಾರವು ಸೂಚಿಸಿರುವಂತೆ, ಆಸ್ತಿಗಳ ಮಾಲೀಕರುಗಳಿಗೆ ಇ-ಆಸ್ತಿ ತಂತ್ರಾಂಶದಡಿ ಆಸ್ತಿಗಳಿಗೆ ಇ-ಖಾತಾ ನೀಡುವ ಉದ್ದೇಶದಿಂದ ಪ್ರತಿ ವಾರ್ಡ್ ವಾರು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಆಸ್ತಿ ಮಾಲೀಕರುಗಳು ನಿಗಧಿಪಡಿಸಿರುವ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ, 07 ದಿನಗಳೊಳಗಾಗಿ ಇ-ಖಾತೆಯನ್ನು ನೀಡಲು ನಿರ್ಧರಿಸಲಾಗಿದೆ. ಹಾಗೂ ಸಿ.ಆರ್‍ ಗೆ ನಿಗಧಿಪಡಿಸಿದ ದಾಖಲಾತಿಗಳೊಂದಿಗೆ ಶೇ.15 ರಷ್ಟು ನಕ್ಷೆ ಉಲ್ಲಂಘನೆ ಅನುಪಾತದೊಳಗಿರುವ ಕಟ್ಟಡಗಳಿಗೆ ಸಿ.ಆರ್ ಅನ್ನು ನೀಡಲು ಅಭಿಯಾನ ಕೈಗೊಳ್ಳಲು ಉದ್ದೇಶಿಸಲಾಗಿದೆ.

ULMS (SBPAS) ತಂತ್ರಾಂಶ ಅನುಷ್ಠಾನ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಟ್ಟಡ ಪರವಾನಿಗೆ ಮಂಜೂರಾತಿಯನ್ನು ನಿರ್ಮಾಣ್-2.0 ತಂತ್ರಾಂಶದ ಮೂಲಕ ನೀಡಲಾಗುತ್ತಿದ್ದು, ಸದರಿ ಕಟ್ಟಡ ಪರವಾನಿಗೆ ಮಂಜೂರಾತಿ ಸೇವೆಯನ್ನು ಜನಸ್ನೇಹಿಯಾಗಿ ಹಾಗೂ ಪರಿಣಾಮಕಾರಿಯಾಗಿ ನೀಡುವ ಸಲುವಾಗಿ ಸರ್ಕಾರದಿಂದ ಹೊಸದಾಗಿ ULMS (UNIFIED LAND MANAGEMENT SYSTEM) (SBPAS) ತಂತ್ರಾಂಶವನ್ನು ಅಭಿವೃದ್ದಿ ಪಡಿಸಲಾಗಿದ್ದು, ಇನ್ನು ಮುಂದೆ ಪಾಲಿಕೆಯಲ್ಲಿ ಕಟ್ಟಡ ಪರವಾನಿಗೆ ಮಂಜೂರಾತಿ ಸೇವೆಯನ್ನು ನಿರ್ಮಾ‍ಣ್-2.0 ತಂತ್ರಾಂಶದ ಬದಲಾಗಿ ULMS (SBPAS) ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಸೇವೆಯನ್ನು ನೀಡಲು ಉದ್ದೇಶಿಸಲಾಗಿದೆ.

ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳು.

ಈ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಗಳನ್ವಯ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸ್ವಯಂ ಉದ್ಯೋಗ ಸಹಾಯಧನ, ವ್ಯಾಸಂಗ ಪ್ರೋತ್ಸಾಹಧನ, ಕ್ರೀಡಾ ಪ್ರೋತ್ಸಾಹಧನ, ವೈದ್ಯಕೀಯ ಸಹಾಯಧನ ಹಾಗೂ ಪಕ್ಕಾಮನೆ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ವೈಯಕ್ತಿಕ ಕಾರ್ಯಕ್ರಮಗಳಲ್ಲದೆ, ಈ ಸಮುದಾಯದ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಮುದಾಯ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ.

ಸದರಿ ಅನುದಾನದಡಿ ಪೌರ ಕಾರ್ಮಿಕರ ಕಾಲೋನಿಗಳಲ್ಲಿ, ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ, ಯೋಗ ಕೊಠಡಿ, ಜಿಮ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ನಗರದ ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಗಳು [ಶೇ.7.25]

ಈ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಗಳನ್ವಯ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ಬಡಜನರ ಶ್ರೇಯೋಭಿವೃದ್ದಿಗಾಗಿ ವೈಯಕ್ತಿಕ ಹಾಗೂ ಸಮುದಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳು [ಶೇ.5]

ನಗರದ ವಿಶೇಷಚೇತನರ ಕ್ಷೇಮಾಭಿವೃದ್ಧಿಗಾಗಿ ಪಾಲಿಕೆಯು ಸರ್ಕಾರದ ಮಾರ್ಗಸೂಚಿಯಂತೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಸದರಿ ಕಾರ್ಯಕ್ರಮಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ ಸಹ ಮುಂದುವರೆಸಲು ನಿರ್ಧರಿಸಲಾಗಿದೆ.

ಮಾನ್ಯರೇ,
ಈ ಆಯ-ವ್ಯಯವನ್ನು ತಯಾರಿಸಲು ಸಹಕಾರ ನೀಡಿದ ಆಯುಕ್ತರು, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.

ಜೈ ಹಿಂದ್, ಜೈ ಕರ್ನಾಟಕ,

(ನಿತೇಶ್ ಪಾಟೀಲ್, ಭಾ.ಆ.ಸೇ)
ಆಡಳಿತಾಧಿಕಾರಿಗಳು
ಮೈಸೂರು ಮಹಾನಗರ ಪಾಲಿಕೆ
ಮೈಸೂರು.

2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿ ಅನುಷ್ಠಾನಗೊಳಿಸಿದ ಸಾಧನೆಗಳು.

• ವಲಯ ಕಚೇರಿಗಳ ನಿರ್ಮಾಣ ಕಾರ್ಯಕ್ರಮದಡಿ ವಲಯ ಕಛೇರಿ-03ರ ಕಟ್ಟಡವು ಎಲ್ಲಾ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಪೂರ್ಣಗೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡು ಕಾರ್ಯಾರಂಭಗೊಂಡಿರುತ್ತದೆ.

• ವಾಹನ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಯಡಿ ಪುರಭವನದ ಬೇಸ್‌ಮೆಂಟ್‌ನಲ್ಲಿರುವ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ನೀಡಲಾಗಿದೆ.

• ಕುಡಿಯುವ ನೀರು ಸರಬರಾಜು ಉನ್ನತೀಕರಣ ಕಾರ್ಯಕ್ರಮದಡಿ 120 ಎಂಎಲ್‌ಡಿ ಉನ್ನತೀಕರಿಸುವ ಕಾಮಗಾರಿಯು ಪೂರ್ಣಗೊಂಡು, ಚಾಲನೆಗೊಳಿಸಲಾಗಿದೆ.

• ಬಲ್ಕ್ ಪ್ಲೋಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

• ಟ್ರಾನ್ಸ್ಫುರ್ ಘಟಕಗಳ ನಿರ್ಮಾಣ ಕಾರ್ಯಕ್ರಮದಡಿ ವಲಯ ಕಛೇರಿ-06ರ ಜೋಡಿತೆಂಗಿನ ಮರದ ಬಳಿ ಮತ್ತು ವಲಯ ಕಛೇರಿ-07 ರ ಕೆಸರೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಟ್ರಾನ್ಸ್ಫ7ರ್ ಘಟಕಗಳ ಕಾಮಗಾರಿ ಪೂರ್ಣಗೊಂಡಿರುತ್ತದೆ.

• ವಲಯ ಕಛೇರಿ-05ರ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಟ್ರಾನ್ಸ್ಫ7ರ್ ಘಟಕ ಪ್ರಗತಿಯಲ್ಲಿರುತ್ತದೆ.

• ವಿದ್ಯಾರಣ್ಯಪುರಂ ಮತ್ತು ರಾಯನಕೆರೆಯ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ Material Recovery Facility (MRF)ಗಳನ್ನು ಅಳವಡಿಸಿ ಅನುಷ್ಠಾನಗೊಳಿಸಲು ಬೇಕಿರುವ ಯಂತ್ರೋಪಕರಣಗಳನ್ನು ಖರೀದಿಸಿ ಸಂಗ್ರಹಿಸಲಾಗಿದೆ.

• ವಿದ್ಯಾರಣ್ಯಪುರಂ ಘನ ತ್ಯಾಜ್ಯ ಸಂಸ್ಕರಣಾ ಘಟಕದ ನವೀಕರಣ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ತ್ಯಾಜ್ಯ ಸಂಸ್ಕರಣಾ ಕಾರ್ಯವನ್ನು ಪುನರಾರಂಭಿಸಲಾಗಿದೆ. ಇದರ ಮೂಲಕ ನಗರದ ಹಸಿ ತ್ಯಾಜ್ಯವನ್ನು ಮೂಲದಲ್ಲೇ ವೈಜ್ಞಾನಿಕವಾಗಿ ಸಂಸ್ಕರಿಸುವ ವ್ಯವಸ್ಥೆ ಬಲಗೊಂಡಿದ್ದು, ತ್ಯಾಜ್ಯ ಸಂಗ್ರಹಣೆಯ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಪರಿಸರ ಸ್ನೇಹಿ ಗೊಬ್ಬರ ಉತ್ಪಾದನೆಯ ಮೂಲಕ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಗಳಿಗೆ ಸಹಕಾರಿಯಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹಾಗೂ ಸ್ವಚ್ಛ ಮತ್ತು ಸುಸ್ಥಿರ ನಗರ ನಿರ್ಮಾಣಕ್ಕೆ ಮಹತ್ತರವಾಗಿ ನೆರವಾಗುತ್ತಿದೆ.

• ಕಟ್ಟಡ ಭಗ್ನಾವಶೇಷ ತ್ಯಾಜ್ಯ ಸಂಸ್ಕರಣ ಘಟಕ ಕಾರ್ಯಕ್ರಮದಡಿ ಘಟಕ ನಿರ್ಮಾಣಕ್ಕಾಗಿ ಅಗತ್ಯವಿರುವ ವಾಹನ ಯಂತ್ರೋಪಕರಣಗಳನ್ನು ಖರೀದಿಸಿ ಸಂಗ್ರಹಿಸಲಾಗಿದೆ ಮತ್ತು ಸಿವಿಲ್ ಕಾಮಗಾರಿ ಪ್ರಗತಿಯಲ್ಲಿರುತ್ತದೆ.

• ಸೂಪರ್ ಸಕ್ಕರ್, ಜೆಟ್ಟಿಂಗ್ ಯಂತ್ರ ಮತ್ತು ಡಿಸಿಲ್ಟಿಂಗ್ ಯಂತ್ರಗಳನ್ನು ಖರೀದಿಸಲು ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಪ್ರಸ್ತುತ ಸಾಲಿನಲ್ಲಿ ಒಟ್ಟು 25 ಸಂಖ್ಯೆಯ ವಾಹನಗಳನ್ನು ಸರಬರಾಜು ಮಾಡಿಕೊಂಡು, ಒಳಚರಂಡಿ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

• ಇ-ಖಾತಾ ನೀಡುವ ಅಭಿಯಾನದಡಿ ಈವರೆಗೂ 69,500 ಕ್ಕೂ ಹೆಚ್ಚಿನ ಆಸ್ತಿಗಳಿಗೆ ಇ-ಖಾತಾವನ್ನು ನೀಡಲಾಗಿದೆ.

• ಬಿ-ಖಾತಾ ಆಂದೋಲನದ ಮೂಲಕ ಈವರೆಗೂ 6000 ಕ್ಕೂ ಹೆಚ್ಚಿನ ಆಸ್ತಿಗಳಿಗೆ ಬಿ-ಖಾತಾವನ್ನು ನೀಡಲಾಗಿದೆ.

• ಕಂದಾಯ ಸೇವೆಗಳ ವಿಕೇಂದ್ರೀಕರಣದಿಂದ 4000.00 ಚ.ಅಡಿ ಗಳವರೆಗಿನ ಆಸ್ತಿಗಳಿಗೆ ವಲಯ ಕಛೇರಿಗಳಲ್ಲೇ ಖಾತಾ ನೀಡುವ ಅಧಿಕಾರವನ್ನು ನೀಡಿರುವುದರಿಂದ ಆಸ್ತಿ ಮಾಲೀಕರುಗಳಿಗೆ ಬಹಳ ಉಪಯುಕ್ತವಾಗಿದೆ.

Join WhatsApp

Join Now

Join Telegram

Join Now

Leave a Comment